Showing posts with label Daasara Padagalu. Show all posts
Showing posts with label Daasara Padagalu. Show all posts

Friday, 11 October 2013

ತಾಳುವಿಕೆಗಿಂತನ್ಯ ತಪವು ಇಲ್ಲ

ತಾಳುವಿಕೆಗಿಂತನ್ಯ ತಪವು ಇಲ್ಲ

- ಶ್ರೀ ವಾದಿರಾಜರ ಕೃತಿ

ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ

ದುಷ್ಟಜನರು ನುಡಿವ ನಿಷ್ಟುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೇ ತಾಳು
ನೆಟ್ಟ ಸಸಿ ಫಲ ತರುವತನಕ  ಶಾಂತಿಯ ತಾಳು
ಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು

ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ

ಹಳಿದು ರಂಜಿಸುವಂತ ಹಗೆಯ ಮಾತನೆ ತಾಳು
ಸುಳಿನುಡಿ ಕುಹಕಾದಿ ಮಂತ್ರವನು ತಾಳು
ಅಳುಕದೆಲೆ ಅರಸು ಬಿಂಕದ ನುಡಿಯ ನೀ ತಾಳು
ಹಲಜರಾನುಜರನ್ನು ಹೃದಯದಲಿ ತಾಳು

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು 
ಉಕ್ಕೋ ಹಾಲಿಗೆ ನೀರನಿಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು

Sunday, 29 September 2013

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ 

ರಚನೆ : ಪುರಂದರದಾಸರು


ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

ಕುಂದಣದ ಆಶ್ರಯವು ನವರತ್ನಗಳಿಗೆಲ್ಲ
ಚಂದಿರನ ಆಶ್ರಯವು ಚಕೋರಗಳಿಗೆ
ಕಂದರ್ಪನಾಶ್ರಯವು ವಸಂತ ಕಾಲಕ್ಕೆ
ಗೋವಿಂದನಾಶ್ರಯವು ಮರಣಕಾಲದೊಳು

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯ ನದಿಗಳು ರಿಶಿಗಳಾಶ್ರಯವು
ಕಣ್ಣಿಲ್ಲದಾತನಿಗೆ ಕೈಗೋಲಿನಾಶ್ರಯವು
ತನ್ನಿಷ್ಟ ಪಡೆದವಗೆ ನಿನ್ನ ಆಶ್ರಯವು

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

ಪತಿವ್ರತಾ ವನಿತೆಗೆ ಪತಿಯೊಂದೆ ಅಶ್ರಯವು
ಯತಿಗಳಿಗೆ ಪರಮ ಶೃತಿ  ಪ್ರಣವದಾಶ್ರಯವು 
ಮತಿವಂತನಿಗೆ ಹರಿಯ ಸ್ತುತಿಗಳೇ ಆಶ್ರಯವು
ಹಿತವಾದ ಪುರಂದರ ವಿಠಲನಾಶ್ರಯವು

ನಿನ್ನನಾಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೋ ಮನದೀಷ್ಟವೀಯೋ

Monday, 2 September 2013

ದಾಸನಾಗು ವಿಶೇಷನಾಗು

ದಾಸನಾಗು ವಿಶೇಷನಾಗು

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ
ಜೀವರಾಶಿಯನ್ನು ದಾಟಿ ಬಂದ ಈ ಶರೀರ
ತಾನಲ್ಲ ತನ್ನದಲ್ಲ ತಾನಲ್ಲ ತನ್ನದಲ್ಲ
ಆಸೆ ಥರವಲ್ಲ ಮುಂದೆ ಬಹುದಲ್ಲ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ಆಶ-ಕ್ಲೇಶ- ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿವಾರಣಾಸಿ ಕಂಚಿ ಕಾಣ- ಹಸ್ತಿ ರಾಮೇಶ್ವರ
ಏಸು ದೇಸ  ತಿರುಗಿದರೆ ಬಹುದೇನೋ ಅಲ್ಲಿ ಹೋದೇನೋ

ದೋಷ ನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬರಿ ಮಾಡಿದರು ಫಲವೇನು? ಈ ಛಲವೇನು?
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರು ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ

ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ
ಸುರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮ್ರಿತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

 

Sunday, 4 August 2013

ತಂಬೂರಿ ಮೀಟಿದವ

ತಂಬೂರಿ ಮೀಟಿದವ 

ರಚನೆ : ಪುರಂದರ ದಾಸರು


ತಂಬೂರಿ ಮೀಟಿದವ ಭವಾಬ್ಧಿ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ

ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ
ಗಾಯನ ಪಾಡಿದವ ಹರಿಮೂರ್ತಿ ನೋಡಿದವ

ಪುರಂದರ ವಿಠಲನ ನೋಡಿದವ
ವೈಕುಂಠಕೆ ಓಡಿದವ

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ

ಯೂಟ್ಯೂಬ್ ಲಿಂಕ್:
http://www.youtube.com/watch?v=PWT9mu82awg&feature=youtu.be







Friday, 2 August 2013

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಲ್ಲಣಿಸದಿರು ಕಂಡ್ಯ ತಾಳು ಮನವೇ 

ರಚನೆ : ಕನಕದಾಸರು 


 













ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ


ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ

ಅಡವಿಯೊಳಗಾಡುವ ಮೃಗ-ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರ ಇಟ್ಟವರು ಯಾರು
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ
ತಲ್ಲಣಿಸದಿರು ಕಂಡ್ಯ ತಾಳು ಮನವೇ

ಕಲ್ಲೊಳಗೆ ಹುಟ್ಟಿರುವ ಕ್ರಿಮಿ ಕೀಟಗಳಿಗೆಲ್ಲ
ಅಲ್ಯಲ್ಲಿ ಆಹಾರ ಇಟ್ಟವರು ಯಾರು
ಪುಲ್ಲಲೋಚನ ನಮ್ಮ ನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ತಲ್ಲಣಿಸದಿರು ಕಂಡ್ಯ ತಾಳು ಮನವೇ



ಯೂಟ್ಯೂಬ್ ವೀಡಿಯೊ ಲಿಂಕ್ :
http://www.youtube.com/watch?v=2yIFCg2sMiI